ನರಬಲಿ
	ಕೆರೆಕಟ್ಟೆಗಳನ್ನೂ ಕಟ್ಟಡಗಳನ್ನೂ ಭದ್ರವಾಗಿ ನಿಲ್ಲಿಸುವುದಕ್ಕಾಗಿ ರಾಜ್ಯದಲ್ಲಿ ತಲೆದೋರಿದ ಕೆಡಕು ಕ್ಷಾಮಗಳ ನಿವಾರಣೆಗಾಗಿ ಇಷ್ಟದೈವಗಳನ್ನು ಒಲಿಸಿಕೊಂಡು, ಶತ್ರುಗಳನ್ನು ನಾಶ ಮಾಡುವುದಕ್ಕಾಗಿ, ವೈಯಕ್ತಿಕ ಆಸೆಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಪಿತೃಗಳನ್ನು ಹಾಗೂ ಪ್ರಕೃತಿಶಕ್ತಿಗಳನ್ನು ಸಂತೃಪ್ತಿ ಪಡಿಸುವುದಕ್ಕಾಗಿ, ಹೆಚ್ಚು ಬೆಳೆ ಪಡೆಯುವುದಕ್ಕಾಗಿ ಅಥವಾ ಯುದ್ಧಗಳಲ್ಲಿ ಗಳಿಸಿದ ವಿಜಯವನ್ನು ಆಚರಿಸುವುದಕ್ಕಾಗಿ, ಮನುಷ್ಯರನ್ನು ಬಲಿ ಕೊಡುತ್ತಿದ್ದ ಒಂದು ಧಾರ್ಮಿಕ ಸಂಪ್ರದಾಯ.  ಪ್ರಾಚೀನ ಮತ್ತು ಮಧ್ಯಕಾಲೀನ ಯುದ್ಧಗಳಲ್ಲಿ ಪ್ರಪಂಚಾದ್ಯಂತ ಹೆಚ್ಚು ಆಚರಣೆಯಲ್ಲಿದ್ದ ಈ ಪದ್ಧತಿ ಸಾಮಾನ್ಯವಾಗಿ ಬೇಟೆಯಾಡುವ ಜನರಿಗಿಂತ ವ್ಯವಸಾಯ ವೃತ್ತಿಯನ್ನು ಅವಲಂಬಿಸಿದವರಲ್ಲಿ ಹೆಚ್ಚಾಗಿತ್ತು. ಇದು ತೀರ ಅನಾಗರಿಕ ಜನಾಂಗಗಳಲ್ಲಿ ಬಹಳ ಕಡಿಮೆಯಿದ್ದು, ಅರೆ ನಾಗರಿಕರಲ್ಲಿ, ಕ್ರೂರ ಜನಾಂಗಗಳಲ್ಲಿ ಹೆಚ್ಚಾಗಿತ್ತೆಂದೂ ತೀರಾ ಕೆಳಹಂತದ ಸಂಸ್ಕøತಿಗಳಲ್ಲಿ ಇದರ ಅಸ್ತಿತ್ವದ ಬಗ್ಗೆ ಯಾವ ಮಾಹಿತಿಗಳೂ ದೊರೆಯುವುದಿಲ್ಲವೆಂದೂ ವೆಸ್ಟರ್ ಮಾರ್ಕ್ ಅಭಿಪ್ರಾಯಪಡುತ್ತಾನೆ. 

	ಸಾಮಾನ್ಯವಾಗಿ ಎಲ್ಲ ನರಬಲಿಗಳೂ ಸಾಮೂಹಿಕವಾಗಿ ಕೈಗೊಳ್ಳುತ್ತಿದ್ದ ವಿಧಿವಿಹಿತ ಕೊಲೆಗಳಾಗಿದ್ದು ಕೆಲವೊಮ್ಮೆ ಕೇವಲ ಗುಂಪಿನ ಅಥವಾ ಪಂಗಡದ ಪ್ರತಿನಿಧಿಯ ಮೂಲಕ ನಡೆಯುತ್ತಿದ್ದವು. ಭಾರತ, ಗ್ರೀಸ್, ಇಟಲಿ, ಈಜಿಪ್ಟ್, ಜಪಾನ್, ಆಫ್ರಿಕ ಮುಂತಾದ ಕಡೆಗಳಲ್ಲಿ ನರಬಲಿ ಯಥೇಚ್ಛವಾಗಿದ್ದುದು ಕಂಡುಬಂದಿದೆ.

	ಆಫ್ರಿಕನ್ನರು ಸಾಮಾನ್ಯವಾಗಿ ವ್ಯವಸಾಯ ಸಂಬಂಧ ಹಬ್ಬಗಳಲ್ಲಿ ಹೆಚ್ಚು ನರಬಲಿ ಕೊಡುತ್ತಿದ್ದರು. ಉದಾ: ಆಷಂತಿಗಳು ಪ್ರತಿ ಸೆಪ್ಟಂಬರಿನಲ್ಲಿ ನಡೆಯುತ್ತಿದ್ದ ಗೆಣಸು ಕುಯ್ಲಿನ ಹಬ್ಬದಲ್ಲಿ ಹಬ್ಬಕ್ಕೆಂದೇ ಮೀಸಲಾಗಿದ್ದ ನೂರು ಮಂದಿ ಕೈದಿಗಳನ್ನು ಬಲಿ ಕೊಡುತ್ತಿದ್ದರೆಂದು ತಿಳಿದುಬಂದಿದೆ. ರಾಷ್ಟ್ರದ ಶಕ್ತಿ ವೃದ್ಧಿಸಬೇಕಾದರೆ ಬಲಿಗಳು ಹೆಚ್ಚಬೇಕು ಎಂಬ ಭಾವನೆ ಆಫ್ರಿಕನ್ನರಲ್ಲಿತ್ತು. ನ್ಯಾಸಾಲ್ಯಾಂಡ್ ಮತ್ತು ಉಗಾಂಡಾಗಳಲ್ಲಿ ಪಿತೃಪೂಜೆಗಳಿಗೆ ಸಂಬಂಧಿಸಿದ ನರಬಲಿಗಳು ಹೆಚ್ಚಾಗಿದ್ದವು. ವ್ಯಕ್ತಿಯೊಬ್ಬ ಸತ್ತಾಗ ಜೊತೆಯಲ್ಲಿಯೇ ಅವನ ಉಳಿದ ಸೇವಕರನ್ನೂ ಜೀವಂತವಾಗಿಯೇ ಹೂಳುವ ಪದ್ಧತಿ ಇವರಲ್ಲಿತ್ತು.

	ಅಮೆರಿಕದ ಮೆಕ್ಸಿಕನ್ನರು ಸೂರ್ಯನ ಬಲವರ್ಧನೆಗೆ ಮನುಷ್ಯರ ರಕ್ತ ಅಗತ್ಯವೆಂದು ನಂಬಿ ಪ್ರತಿವರ್ಷವೂ ವ್ಯವಸಾಯ ಸಂಬಂಧ ಹಬ್ಬವೊಂದರಲ್ಲಿ ಸಾವಿರಾರು ಜನರನ್ನು ಬಲಿಕೊಡುತ್ತಿದ್ದರಂತೆ. ಪೆರುವಿನ ಇಂಕ ಜನ ತಮ್ಮ ರಾಜನ ಪಟ್ಟಾಭಿಷೇಕ ಸಮಯದಲ್ಲಿ ಮನುಷ್ಯರನ್ನು ಬಲಿ ಕೊಡುತ್ತಿದ್ದರು. ಉತ್ತರ ಅಮೆರಿಕದ ನ್ಯಾಚಿಸ್, ಇರಕ್ವಾಯಿಸ್, ಸ್ಕಿಡಿಪಾನಿ, ಹ್ಯೂರನ್ ಪಂಗಡಗಳ ಜನರಲ್ಲಿ ನರಬಲಿ ಬಹು ವಿರಳವಾಗಿತ್ತು. 1838ರಲ್ಲಿ ಪ್ಯೂಬ್ಲೊ ಪ್ರದೇಶದ ಜನ ಪಾನಿ ಬಣದ ಹುಡುಗಿಯೊಬ್ಬಳನ್ನು, ಬಿತ್ತಿದ ಬೀಜ ಮೊಳೆತು ಚೆನ್ನಾಗಿ ಫಲ ಕೊಡಲೆಂದು ತುಂಡರಿಸಿದರೆಂದು ತಿಳಿಯುತ್ತದೆ.

	ಯುದ್ಧದಲ್ಲಿ ಸಿಕ್ಕಿದ ಸೆರೆಯಾಳುಗಳನ್ನು ಬಲಿಕೊಡುವ ಪದ್ದತಿ ಪ್ರಾಚೀನ ಈಜಿಪ್ಟ್, ಮೆಸಪೊಟೊಮಿಯ ಮತ್ತು ಪ್ಯಾಲೆಸ್ಟೈನ್‍ಗಳಲ್ಲಿತ್ತು. ಈಜಿಪ್ಟಿನ ಅಬೈಡಾಸ್‍ನಲ್ಲಿರುವ ಮೊದಲ ರಾಜ ವಂಶದವರ ಸಮಾಧಿಗಳಿಂದ, ರಾಜಕುಮಾರಿಯರು ಸತ್ತಾಗ ಅವರ ಜೊತೆ ಜೀವನಕ್ಕೆ ಬೇಕಾಗುವ ಕೆಲವು ವಸ್ತುಗಳನ್ನೂ ಮತ್ತು ಅವಳ ಸೇವಕ, ಸೇವಕಿಯರನ್ನೂ ಹೂಳುತ್ತಿದ್ದರೆಂದು ತಿಳಿದು ಬಂದಿದೆ. ಪುನರ್ಜನ್ಮದಲ್ಲಿದ್ದ ನಂಬಿಕೆಯೆ ಬಹುಷಃ ಇದ್ಕಕ್ಕೆ ಕಾರಣವಿರಬಹುದು.  ಕ್ಯಾನನೈಟುಗಳು ಪ್ರಮುಖ ಕಟ್ಟಡಗಳನ್ನು ಕಟ್ಟುವಾಗ ತಳಹದಿಗೆ ಮಕ್ಕಳನ್ನು ಬಲಿಕೊಡುತ್ತಿದ್ದರು. ಇವೆ ಪದ್ಧತಿಯನ್ನು ಕ್ರಮೇಣ ಇಸ್ರೇಲಿಗಳು ಕೂಡ ಅನುಸರಿಸಿದರು. ಇಸ್ರೇಲಿಗಳಂತು ಯುದ್ಧದಲ್ಲಿ ಜಯಗಳಿಸಿದಾಗ ನರ ಬಲಿಕೊಡುವುದರ ಮೂಲಕ ತಮ್ಮ ವಿಜಯೋತ್ಸವ ಆಚರಿಸುತ್ತಿದ್ದರು.

	ಇರಾನ್, ಭಾರತ ಮತ್ತು ದೂರಪ್ರಾಚ್ಯಗಳಲ್ಲಿ ನರಬಲಿ ರೂಢಿಯಲ್ಲಿತ್ತು. ಕ್ರಿ.ಪೂ. ಆರನೆಯ ಶತಮಾನದಲ್ಲಿದ್ದ ಜರತುಷ್ಟ್ರ ಎಲ್ಲ ವಿಧದ ಬಲಿಗಳನ್ನೂ ವಿರೋಧಿಸಿದರೂ ಅವನ ಮರಣದ ಅನಂತರ ಇರಾನಿನಲ್ಲಿ ನರಬಲಿಗಳು ಅಲ್ಲಲ್ಲಿ ಕಾಣಿಸಿಕೊಂಡವು. ವೇದಗಳ ಕಾಲದಲ್ಲಿ ಭಾರತದಲ್ಲಿ ನರಮೇಧ ನಡೆಯುತ್ತಿತ್ತು ಎಂಬುದಕ್ಕೆ ಯರ್ಜುವೇದಗಳಲ್ಲಿ ಸಾಕಷ್ಟು ಪುರಾವೆಗಳಿವೆ. ಕಾಳಿಯ ಆರಾಧಕರು ನರಬಲಿಯಲ್ಲಿ ಹೆಚ್ಚು ನಂಬಿಕೆ ಇಟ್ಟಿದ್ದರೆಂದು ಸಾಹಿತ್ಯಗ್ರಂಥಗಳಿಂದಲೂ ತಿಳಿದು ಬರುತ್ತದೆ. ವಿಕ್ರಮಾದಿತ್ಯನ ಚರಿತ್ರೆಯಲ್ಲಿ ಕನ್ನಡ ಯಶೋಧರ ಚರಿತ್ರೆಯಲ್ಲಿ ನರಬಲಿಯ ಬಗ್ಗೆ ಪ್ರಸ್ತಾಪಗಳಿವೆ. ಬ್ರಿಟೀಷರಿಂದ ಇದು ನಿಷೇಧಗೊಳ್ಳುವವರೆಗೂ ತಂಜಾವೂರಿನ ಶೈವ ದೇವಸ್ಥಾನವೊಂದರಲ್ಲಿ ಪ್ರತಿ ಶುಕ್ರವಾರ ಗಂಡುಮಗುವನ್ನು ಕಾಳಿಗೆ ಬಲಿಕೊಡುತ್ತಿದ್ದರೆಂದು ತಿಳಿಯುತ್ತದೆ. ಜಪಾನೀಯರಲ್ಲಿ ಪ್ರಕೃತಿ ದೇವತೆಗಳಿಗೆ, ಸಮಾಧಿಗಳಿಗೆ ನರಬಲಿ ಕೊಡುವ ಪದ್ಧತಿಯು ಮಧ್ಯಯುಗದಲ್ಲಿ ನಿಷೇಧಗೊಂಡಿತು. ರಾಜ ಸತ್ತರೆ ಅವನ ಪರಿವಾರವನ್ನೂ ಒಟ್ಟಿಗೆ ಹೂಳುವ ಪದ್ಧತಿ ಸುಮಾರು ಹದಿನೇಳನೆಯ ಶತಮಾನದವರೆಗೂ ಚೀನದಲ್ಲಿ ರೂಢಿಯಲ್ಲಿತ್ತು.

	ಗ್ರೀಕರಲ್ಲಿ ಮತ್ತು ರೋಮನ್ನರಲ್ಲಿ ನರಬಲಿಗೆ ಸಂಬಂಧಿಸಿದ ಅನೇಕ ಆಚರಣೆಗಳು ಬೇರೆ ಪ್ರಾಣಿಯನ್ನು ಬಲಿಕೊಡುವಾಗಲೂ ಉಕ್ತವಾಗುತ್ತಿದ್ದವು. ಹೋರಿಯನ್ನೋ, ಮೇಕೆಯನ್ನೋ ಕೊಂದು ಅದನ್ನು ಡಯನೈಸಸ್ ದೇವತೆಯ ಅವತಾರವೆಂದು ಪರಿಗಣಿಸಿ ಅದರ ಮಾಂಸವನ್ನು ಸೇವಿಸುತ್ತಿದ್ದರು. ಪ್ಲುಟಾರ್ಕ್ ಕ್ರಿ.ಪೂ. 480ರಲ್ಲಿ ಸ್ಯಾಲಾಮಿಸ್ ಯುದ್ಧ ಪ್ರಾರಂಭವಾಗುವುದಕ್ಕೆ ಮುನ್ನ ಮೂರು ಜನರನ್ನು ಬಲಿಕೊಟ್ಟ ವಿಷಯವನ್ನು ಉಲ್ಲೇಖಿಸಿದ್ದಾನೆ. ಈಸ್ಕಲಸ್ ತನ್ನ ಅ್ಯಗಮೆಮ್‍ನಾನ್‍ನಲ್ಲಿ ಇಫಿಜೆನಿಯ ಎಂಬುವಳನ್ನು ಬಲಿಕೊಟ್ಟಿದ್ದನ್ನು ತೀವ್ರವಾಗಿ ಖಂಡಿಸಿದ್ದಾನೆ. ಜ್ಯೂಗಳೂ ಪಾಸೋವರ್ ಹಬ್ಬದಲ್ಲಿ ಮಕ್ಕಳನ್ನು ಬಲಿಕೊಡುತ್ತಿದ್ದರೆಂದು ತಿಳಿಯುತ್ತದೆ.

	ಜನಪದ ಸಾಹಿತ್ಯದಲ್ಲಿ ನರಬಲಿ ಆಶಯವುಳ್ಳ ಅನೇಕ ಕಥೆಗಳು ಕಥನಗೀತೆಗಳು ಐತಿಹ್ಯಗಳು ದೊರೆಯುತ್ತವೆ. ಕನ್ನಡದಲ್ಲಿ ಕೆರೆಗೆ ಹಾರ ಒಂದು ಉತ್ತಮ ಉದಾಹರಣೆ. ಎಷ್ಟೋ ಗ್ರಾಮದೇವತೆಗಳಿಗೆ ಗರ್ಭಿಣಿ ಹೆಂಗಸರನ್ನು ಬಲಿ ಕೊಡುತ್ತಿದ್ದರೆಂದು ಹೇಳುವ ಐತಿಹ್ಯಗಳಿವೆ. ಈ ಪದ್ಧತಿ  ಇಂದು ಬಹಳಷ್ಟು ಕಡಿಮೆಯಾಗಿದ್ದರೂ ಅಲ್ಲಲ್ಲಿ ಅಜ್ಞಾತವಾಗಿ ಉಳಿದಿರುವುದು ಕಂಡುಬರುತ್ತದೆ.
(ಎಸ್.ಎನ್.ಜಿ)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ